ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡ ಸಿದ್ದಗೊಂಡಿದೆ.ಬಹಳ ದಿನದಿಂದ ಬಿಜೆಪಿ ಪಕ್ಷದಿಂದ ಯಾರನ್ನು ಕಣಕ್ಕಿಳಿಸುತ್ತಾರೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.ಆರ್.ಎಸ್.ಎಸ್ ಹಿನ್ನೆಲೆಯ ಗುರುರಾಜ ಗಂಟಿಹೊಳೆ ಹೆಸರು ಅಂತಿಮಗೊಂಡಿದೆ.ಕಾಂಗ್ರೇಸ್ ಪಕ್ಷದ ಕೆ.ಗೋಪಾಲ ಪೂಜಾರಿ ಹಾಗೂ ಬಿಜೆಪಿಯ ಗುರುರಾಜ್ ಗಂಟಿಹೊಳೆ ನಡುವೆ ನೇರ ಸ್ಪರ್ಧೆಗೆ ವೇದಿಕೆ ಸಿದ್ದಗೊಂಡಿದೆ.
ಮೂಲ ಬಿಜೆಪಿಗರ ಅಸಮಾಧಾನ,ಇಂದು ಸಭೆ ನಿಗಧಿ: ಬೈಂದೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಹಾಗೂ ಬಿಜೆಪಿ ಮುಖಂಡ ಬಾಬು ಶೆಟ್ಟಿ ಪ್ರಬಲ ಆಕಾಂಕ್ಷಿಗಳಾಗಿದ್ದರು ಆದರೆ ಕೊನೆಯ ಹಂತದಲ್ಲಿ ಇಬ್ಬರಿಗೂ ಟಿಕೆಟ್ ಮಿಸ್ ಆಗಿದೆ.ಸಹಜವಾಗಿಯೇ ಎರಡು ಕಡೆಯ ಬೆಂಬಲಿಗರಿಗೂ ಹಾಗೂ ಮೂಲ ಬಿಜೆಪಿ ವಲಯದಲ್ಲಿ ಅಸಮಾಧಾನ ಉಂಟು ಮಾಡಿದೆ.ಒಂದೊಮ್ಮೆ ಇದುವರೆಗೆ ಪಕ್ಷ ಸಂಘಟಿಸಿದ ನಾಯಕರನ್ನು ಹೊರತುಪಡಿಸಿ ಇತರ ನಾಯಕರುಗಳಿಗೆ ಹಿರಿಯರು ಅವಕಾಶ ನೀಡಿದಾಗ ಬೈಂದೂರು ಬಿಜೆಪಿಯ ಮುಂದಿನ ನಡೆಗಳೇನು ಎನ್ನುವುದು ಕೂಡ ಕುತೂಹಲ ಮೂಡಿಸಿದೆ ಮತ್ತು ಬಿಜೆಪಿಯಲ್ಲಿ ಅನೇಕ ಮುಖಂಡರ ರಾಜಕೀಯ ಭವಿಷ್ಯ ಕೂಡ ಪ್ರಶ್ನಾತೀತವಾಗಿದೆ.ಹೀಗಾಗಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಆಕಾಂಕ್ಷಿಗಳ ಒಂದು ಹಂತದ ಸಭೆ ನಿನ್ನೆ ರಾತ್ರಿ ನಡೆದಿದೆ.ಇಂದು ಸಂಜೆ ಹೆಮ್ಮಾಡಿಯಲ್ಲಿ ಮುಂದಿನ ನಡೆ ಕುರಿತು ಚರ್ಚಿಸಲು ಕಾರ್ಯಕರ್ತರ ಸಭೆ ನಿಗಧಿಯಾಗಿದೆ.
ಇನ್ನು ಕಾಂಗ್ರೇಸ್ ಪಾಳಯದಲ್ಲಿ ಕೆ.ಗೋಪಾಲ ಪೂಜಾರಿ ಪರ ಕಾರ್ಯಕರ್ತರ ಪ್ರಚಾರ ಬಿರುಸುಗೊಂಡಿದ್ದು ಇಂದಿನ ಬಿಜೆಪಿ ಪಕ್ಷದ ಸಭೆ ಕೂಡ ಮಹತ್ವದ ಪಾತ್ರ ವಹಿಸಲಿದೆ.ಬಿಜೆಪಿ ನಾಯಕರ ಅಸಮಾಧಾನ ಸರಿಪಡಿಸುವಲ್ಲಿ ಪಕ್ಷದ ಹಿರಿಯರು ಯಶಸ್ವಿಯಾಗುತ್ತಾರ ಎನ್ನುವುದು ಕೂಡ ನಿರೀಕ್ಷಿಸಬೇಕಾಗಿದೆ.ಒಟ್ಟಾರೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೈಂದೂರು ಕ್ಷೇತ್ರದ ರಾಜಕೀಯ ಚಟುವಟಿಕೆ ರಂಗೇರ ತೊಡಗಿದೆ.