ಬೈಂದೂರು: ಕಳೆದ ಒಂದು ವರ್ಷದಿಂದ ಪಟ್ಟಣ ಪಂಚಾಯತ್‌ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು ನಡೆಸುತ್ತಿರುವ ರೈತರ ಹೋರಾಟಕ್ಕೆ ರಾಜ್ಯದ ಮುಖ್ಯಮಂತ್ರಿಯಿಂದ ನ್ಯಾಯ ಒದಗಿಸುವ ಅಭಯ ದೊರೆತಿದೆ.

ಹೆಬ್ರಿಯಲ್ಲಿ ಕಸ್ತೂರಿ ರಂಗನ್‌ ಸಂವಾದ ಕಾರ್ಯಕ್ರಮ ಮುಗಿಸಿ ನಿರ್ಗಮಿಸುತ್ತಿರುವ ವೇಳೆ ರೈತರ ಬೇಡಿಕೆ ಗಮನಿಸಿ ಹಿಂದಿರುಗಿ ಬಂದು ರೈತರ ಜೊತೆ ಮಾತುಕತೆ ನಡೆಸಿದ ರಾಜ್ಯದ ಮುಖ್ಯಮಂತ್ರಿ ನಡೆಗೆ ರೈತರು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಒಂದು ವರ್ಷದ ಹೋರಾಟ: ಬೈಂದೂರು, ಪಡುವರಿ, ಯಡ್ತರೆ ಬೈಂದೂರು ಗ್ರಾಮಗಳನ್ನು ಒಗ್ಗೂಡಿಸಿ 2020 ರಲ್ಲಿ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಲಾಗಿತ್ತು.ಆದರೆ ಈ ಸಂದರ್ಭದಲ್ಲಿ ಅಧಿಕಾರಿಗಳ ಅವೈಜ್ಞಾನಿಕ ವರದಿಯಿಂದಾಗಿ 30 ಕಿ.ಮೀ ಅಂತರದ ಅಭಯಾರಣ್ಯ ವ್ಯಾಪ್ತಿಯ ಕುಗ್ರಾಮಗಳು ಪ.ಪಂ ವ್ಯಾಪ್ತಿಗೆ ಸೇರಿಸಲಾಗಿತ್ತು.ಇದರಿಂದಾಗಿ ಸರಕಾರದಿಂದಲೂ ಗ್ರಾಮೀಣ ಭಾಗಗಳಿಗೆ ಸವಲತ್ತು ನೀಡಲು ಕಷ್ಟಸಾಧ್ಯ. ಜನಸಾಮಾನ್ಯರಿಗೂ ಕೂಡ ಹಳ್ಳಿ ದೈನಂದಿನ ಬದುಕಿನಲ್ಲಿ ಹೊಸ ನಿಯಮ ಉಸಿರುಗಟ್ಟಿಸುವಂತಾಗಿತ್ತು.ಈ ಸಂದರ್ಭದಲ್ಲಿ ಇಲ್ಲಿನ ಸ್ಥಳೀಯರು ಹೈಕೋರ್ಟ್ ನಲ್ಲಿ ದಾವೆ ಹಾಕಿದ್ದು ತನಿಖೆ ವಿಚಾರಣೆ ಹಂತದಲ್ಲಿದೆ.2020 ರಿಂದ ನಿರಂತರ ಹೋರಾಟ ನಡೆಯುತ್ತಿದ್ದು ಬೈಂದೂರಿನಿಂದ ಆರಂಭವಾಗಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಕೂಡ ಸಾವಿರಾರು ರೈತರು ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆದಿದ್ದರು.ನಿರಂತರ 406 ದಿನಗಳಿಂದ ಬೈಂದೂರಿನಲ್ಲಿ ನಿರಂತರ ಹೋರಾಟ ನಡೆಯುತ್ತಿದೆ.

ಹಿಂದಿರುಗಿ ಬಂದು ರೈತರ ಬೇಟಿ ಮಾಡಿದ ಡಿ.ಕೆ: ಹೆಬ್ರಿ ಕಾಲೇಜು ಮೈದಾನದಲ್ಲಿ ಕಸ್ತೂರಿ ರಂಗನ್‌ ವರದಿ ಸಾರ್ವಜನಿಕ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಬೈಂದೂರು ರೈತ ಸಂಘದಿಂದ ಮುಖ್ಯಮಂತ್ರಿ ಬೇಟಿಗಾಗಿ 1500 ಜನ ರೈತರು ತೆರಳಿದ್ದರು.ಕಾರ್ಯಕ್ರಮಕ್ಕೂ ಮುನ್ನ ರೈತರಿಂದ ಮನವಿ ಸ್ವೀಕರಿಸಿದ್ದರು.ಆದರೆ ಜನಸಂದಣಿಯ ಕಾರಣ ಮಾತುಕತೆ ನಡೆಸಿಲ್ಲ.ಭಾಷಣದಲ್ಲೂ ಕೂಡ ರೈತರ ಹೋರಾಟದ ವಿಷಯ ಪ್ರಸ್ತಾಪವಾಗಿರಲಿಲ್ಲ.ಕಾರ್ಯಕ್ರಮ ಮುಗಿದ ಬಳಿಕ ನೂರಾರು ರೈತರು ಮುಖ್ಯಮಂತ್ರಿ ಬೇಟಿಯಾಗಬೇಕು ಮತ್ತು ರೈತರ ನೋವು ಆಲಿಸಬೇಕೆಂದು ಆಗ್ರಹಿಸಿದ್ದರು.ಮಂಗಳೂರಿಗೆ ಕಾರ್ಯಕ್ರಮಕ್ಕಾಗಿ ಸ್ಥಳದಿಂದ ನಿರ್ಗಮಿಸುತ್ತಿರುವ ರೈತರ ಬೇಡಿಕೆ ಆಲಿಸಲು ಖುದ್ದು ಆಗಮಿಸಿ ರೈತರ ಜೊತೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರು.ಮುಖ್ಯಮಂತ್ರಿಯವರ ಈ ನಡೆ ಬೈಂದೂರಿನ ರೈತ ವಲಯದಲ್ಲಿ ಬಹಳಷ್ಟುಪ್ರಶಂಸೆ ವ್ಯಕ್ತವಾಗಿದೆ.

ಕೊರಳಲ್ಲಿ ಧರಿಸಿದ ಕೊಲ್ಲೂರು ಶಲ್ಯ: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೆಬ್ರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ರೈತರು ಕೊಲ್ಲೂರು ಮೂಕಾಂಬಿಕೆಗೆ ಪೂಜೆ ಸಲ್ಲಿಸಿ ಪ್ರಸಾದ ಹಾಗೂ ಶಲ್ಯವನ್ನು ತೆಗೆದುಕೊಂಡಿದ್ದರು.ಮುಖ್ಯಮಂತ್ರಿಗಳಿಗೆ ಬೈಂದೂರು ರೈತರ ಸಂಘದ ವತಿಯಿಂದ ದೇವಿ ಶಲ್ಯವನ್ನು ಹಾಕಲಾಗಿತ್ತು.ದೇವಿ ಪ್ರಸಾದ ಸ್ವೀಕರಿಸಿದ ಮುಖ್ಯಮಂತ್ರಿಗಳು ಉಳಿದೆಲ್ಲಾ ಶಲ್ಯವನ್ನು ಬದಿಗಿಟ್ಟು ಕೊಲ್ಲೂರು ಶಲ್ಯವನ್ನು ಕುತ್ತಿಗೆಗೆ ಸುತ್ತಿ ಗಂಟು ಹಾಕಿಕೊಂಡಿದ್ದರು ಮತ್ತು ಕಾರ್ಯಕ್ರಮದ ಕೊನೆಯವರಗೂ ಶಲ್ಯವನ್ನು ಧರಿಸಿರುವುದು ವಿಶೇಷವಾಗಿತ್ತು.

ಪಟ್ಟಣ ಪಂಚಾಯತ್‌ ಸಮಸ್ಯೆಗಳೇನು: ಬೈಂದೂರು ಪಟ್ಟಣ ಪಂಚಾಯತ್‌ ಸ್ವಾಗತಾರ್ಹ ಆದರೆ ಗ್ರಾಮೀಣ ಭಾಗಗಳನ್ನು ಸೇರ್ಪಡಿಸಿರುವುದು ಅವೈಜ್ಞಾನಿಕವಾಗಿದೆ.ಹೀಗಾಗಿ ಕುಗ್ರಾಮಗಳನ್ನು ಕೈಬಿಟ್ಟು ಉಳಿದ ವ್ಯಾಪ್ತಿಯೊಳಗೊಂಡು ಪಟ್ಟಣ ಪಂಚಾಯತ್‌ ರಚಿಸಿದೆ ಎನ್ನುವುದು ರೈತರ ಆಗ್ರಹವಾಗಿತ್ತು.ಈ ಕುರಿತು ಹಿಂದಿನ ಜಿಲ್ಲಾಧಿಕಾರಿಗಳು ಮರು ಪರಿಶೀಲನೆ ನಡೆಸಿ ಐದು ವಾರ್ಡ್‌ಗಳನ್ನು ಕೈಬಿಟ್ಟು ಉಳಿದ ವ್ಯಾಪ್ತಿ ಮತ್ತು ಪಟ್ಟಣ ಪಂಚಾಯತ್‌ ವ್ಯಾಪ್ತಿ ಸೇರಿಸಲು ಸರಕಾರಕ್ಕೆ ಪ್ರಸ್ತಾವನೆ ಕಳಿಸಿದ್ದರು.ಮಾತ್ರವಲ್ಲದೆ ಇಲ್ಲಿನ ಜನರ ಸಮಸ್ಯೆ ಇರುವ ಕಾರಣ ಪಟ್ಟಣ ಪಂಚಾಯತ್‌ ಚುನಾವಣೆ ಕೂಡ ಮುಂದೂಡಲಾಗಿದೆ.ಈಗಿನ ಜಿಲ್ಲಾಧಿಕಾರಿಗಳು ಕೂಡ ರೈತರ ಪರ ಸರಕಾರಕ್ಕೆ ವರದಿ ನೀಡಿದ್ದರು.ಹಿಂದಿನ ನಗರಾಭಿವೃದ್ದಿ ಸಚಿವರು ರೈತರ ಬೇಡಿಕೆಯನ್ನು ತಕ್ಷಣ ಸಂಪುಟ ಸಭೆಗೆ ಜಾರಿಮಾಡಲು ಸೂಚಿಸಿದ್ದರು.ಆದರೆ ಬೆಂಗಳೂರಿನಲ್ಲಿ ಅಧಿಕಾರಿಗಳ ನಡೆಯಿಂದ ವಿಳಂಬವಾಗಿದ್ದು ಮುಖ್ಯಮಂತ್ರಿಗಳು ರೈತರ ಜೊತೆ ಮಾತುಕತೆ ನಡೆಸಿ ಇಲಾಖಾ ಮಟ್ಟದಲ್ಲಿ ಚರ್ಚಿಸಿ ಶೀಘ್ರ ನ್ಯಾಯ ಒದಗಿಸುವ ಭರವಸೆ ನೀಡಿರುವುದು ಬೈಂದೂರು ರೈತರಿಗೆ ಹೊಸ ಆಶಾಭಾವನೆ ಮೂಡಿಸಿದೆ ಮತ್ತು ಬಹುದಿನದ ರೈತರ ಹೋರಾಟಕ್ಕೊಂದು ಸಾರ್ಥಕತೆ ದೊರೆಯುವ ಹಂತದಲ್ಲಿದೆ.

 

 

 

 

Leave a Reply

Your email address will not be published. Required fields are marked *

twelve − 12 =