ಬೈಂದೂರು: ಬಹುನಿರೀಕ್ಷಿತ 2023ರ ಚುನಾವಣೆಯ ಮೂಹೂರ್ತ ಫಿಕ್ಸ್ ಆಗಿದೆ.ರಾಜ್ಯಮಟ್ಟದಲ್ಲಿ ಪಕ್ಷಗಳ ತಯಾರಿ ಸಿದ್ದಗೊಂಡಿದ್ದು ಕೆಲವೇ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾತ್ರ ಅಂತಿಮಗೊಳ್ಳಬೇಕಿದೆ.ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಕೆ.ಗೋಪಾಲ ಪೂಜಾರಿ ಹೆಸರು ಅಂತಿಮಗೊಂಡಿದ್ದು ಒಂದು ಹಂತದ ಪ್ರಚಾರ ಪೂರ್ಣಗೊಂಡಿದೆ.ಆದರೆ ಬಿಜೆಪಿ ಪಾಳಯದಲ್ಲಿ ಮಾತ್ರ ನಾಲ್ಕೈದು ಅಭ್ಯರ್ಥಿಗಳು ಪ್ರಚಾರದಲ್ಲಿದ್ದಾರೆ.ಇವುಗಳ ಸಾಲಿನಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಜಿ.ಪಂ ಸದಸ್ಯ ಕೆ.ಬಾಬು ಶೆಟ್ಟಿ ಹೆಸರು ಮುಂಚೂಣಿಯಲ್ಲಿದ್ದು ಮೂಲ ಬಿಜೆಪಿಗರು ಅಭ್ಯರ್ಥಿಗಳನ್ನು ಬದಲಿಸಿ ಹೊಸಬರಿಗೆ ಅವಕಾಶ ಕೊಡಬೇಕು ಎನ್ನುವ ನಿಲುವು ಕೆ.ಬಾಬು ಶೆಟ್ಟಿಯವರಿಗೆ ಇನ್ನಷ್ಟು ಪೂರಕ ವಾತಾವರಣ ಒದಗಿಸಿಕೊಟ್ಟಿದೆ.

ಬೈಂದೂರು ಪ್ರತಿಭಟನೆ ವಿಚಾರ ಮುಳುವಾಯಿತೆ ಶಾಸಕರಿಗೆ: ಸಹಜವಾಗಿ ಬೈಂದೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಆರಂಭದಲ್ಲಿ ಕಾರ್ಯಕರ್ತರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು.ಜೊತೆಗೆ ಸಂಸದರ ಕೃಪಾಕಟಾಕ್ಷದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ಹರಿದುಬಂದಿತ್ತು.ಆದರೆ ಕಳೆದೆರಡು ವರ್ಷದಲ್ಲಿ ನಡೆದ ಕೆಲವು ವಿದ್ಯಮಾನಗಳು ಮಾತ್ರ ಶಾಸಕರ ಕುರ್ಚಿಗೆ ಕಂಟಕವಾಗಿ ಬಿಟ್ಟಿದೆ .ಮತ್ತು ಟಿಕೆಟ್ ಪಡೆಯಲು ಬೆವರಿಳಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ಗುಟ್ಟಾಗಿ ಉಳಿದಿಲ್ಲ.ರಾಜ್ಯಮಟ್ಟದಲ್ಲಿ ಬಿ.ಎಸ್.ಯಡಿಯೂರಪ್ಪ ರವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಬೇಕು ಎನ್ನುವ ಹೋರಾಟದಲ್ಲಿ ಸಂಸದರ ಲೋಕಸಭಾ ವ್ಯಾಪ್ತಿಯ ಬೈಂದೂರು ಶಾಸಕರು ಕಾರ್ಕಳದ ಶಾಸಕರೊಂದಿಗೆ ಸಮ್ಮತಿ ಸೂಚಿಸಿರುವುದು ಮತ್ತು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ಹಗುರವಾಗಿ ಮಾತಾಡಿರುವುದು ಕಾರ್ಯಕರ್ತರ ಮೂಲಕ ಅವರ ಕಿವಿ ಮುಟ್ಟಿದೆ.ಇದಾದ ಬಳಿಕ ಸಂಸದರು ತಂದಿರುವ ಬಹುತೇಕ ಮಹತ್ವಕಾಂಕ್ಷೆಯ ಯೋಜನೆಗಳಿಗೆ ವಿರೋಧ ಮಾಡಲು ಶಾಸಕರು ಪರೋಕ್ಷವಾಗಿ ಸಹಕರಿಸಿದ ಸುದ್ದಿಯಿದೆ.ಅದರಲ್ಲೂ ಬಾರಿ ಗೊಂದಲ ಉಂಟು ಮಾಡಿದ ಪ್ರಸ್ತುತ ನ್ಯಾಯಾಲಯದಲ್ಲಿರುವ ಬೈಂದೂರು ಗಾಂಧಿ ಮೈದಾನದ ಅಡಿಗರ ನೆನಪಿನ ಪುರಭವನ ನಿರ್ಮಾಣ ಸಂಸದರ ಕನಸಿನ ಯೋಜನೆಯಾಗಿತ್ತು.ಶಾಸಕರು ಹಾಗೂ ಕ್ಷೇತ್ರಾಧ್ಯಕ್ಷರು ಮನಸ್ಸು ಮಾಡಿದ್ದರೆ ಈ ಯೋಜನೆ ವಿರೋಧಿಸುವವರನ್ನು ಆರಂಭದಲ್ಲೆ ವಿಶ್ವಾಸಕ್ಕೆ ಪಡೆಯಬಹುವುದಾಗಿತ್ತು.ಆದರೆ ತೆರೆಮರೆಯಲ್ಲಿ ನಡೆದ ರಾಜಕೀಯದ ಪೂರ್ಣ ವಿವರವನ್ನು ಇಂಚಿಂಚು ಬಿಡದೆ ಬೈಂದೂರಿನ ಮೂಲ ಬಿಜೆಪಿಗರ ನಿಯೋಗ ಸಂಸದರ ಗಮನಕ್ಕೆ ತಂದಿದೆ.ಮಾತ್ರವಲ್ಲದೆ ಈ ಬಗ್ಗೆ  ಕೋರ್ಟ್‌ಗೆ ಸಲ್ಲಿಸಲು ಮಾಹಿತಿ ಹಕ್ಕಿನಲ್ಲಿ ಒಂದೇ ದಿನದಲ್ಲಿ ತಾಲೂಕು ಕಛೇರಿ ಅಧಿಕಾರಿಗೆ ದಾಖಲೆ ನೀಡುವಂತೆ ಒತ್ತಡ ಹಾಕಿರುವುದು ಹಾಗೂ ಜಿಲ್ಲಾಧಿಕಾರಿಗಳಿಗೆ ಸಂಸದರ ಕಛೇರಿಯಿಂದ ಮಾಹಿತಿ ನೀಡಿದ ಬಳಿಕ ಅವರನ್ನು ಅಮಾನತುಗೊಳಿಸಲು ಮುಂದಾದಾಗ ತಡೆ ನೀಡಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ.ಇದಕ್ಕೆ ಪೂರಕವಾಗಿ ಇತ್ತೀಚೆಗೆ ಬೈಂದೂರು ನೂತನ ಆಡಳಿತ ಸೌಧ ಉದ್ಘಾಟನೆ ವೇಳೆ ಸಂಸದರ ಭಾಷಣದಲ್ಲಿ ಅಭಿವೃದ್ದಿಗೆ ವಿರೋಧಿಸುವ ಜನಪ್ರತಿನಿಧಿಗಳಾದರು ಕೂಡ ಅವರ ನಡೆಯನ್ನು ಸಹಿಸುವುದಿಲ್ಲ.ಅಭಿವೃದ್ದಿ ಕಾರ್ಯಗಳಿಗೆ ವಿರೋಧಿಸುವವರನ್ನು ಯಾವುದೇ ಕಾರಣಕ್ಕೂ ಸಹಿಸಲಾರದು ಎನ್ನುವ ಮಾತಿನ ಸೂಕ್ಷ್ಮತೆ ಬಹುತೇಕರು ಗಂಭೀರವಾಗಿ ಪರಿಗಣಿಸಿದಂತಿಲ್ಲ.ಹೀಗಾಗಿ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎನ್ನುವ ಮೂಲ ಬಿಜೆಪಿಗರ ಅಭಿಪ್ರಾಯಕ್ಕೆ ಪಕ್ಷದ ಹಿರಿಯರು ಕೂಡ ದ್ವನಿಕೂಡಿಸಿದಂತಿದೆ ಮತ್ತು ಕೆ.ಬಾಬು ಶೆಟ್ಟಿ ಯವರಿಗೆ ಒಲವು ಸಿಕ್ಕಂತಾಗಿದೆ.ಇದರ ಜೊತೆಗೆ ಆರ್.ಎಸ್.ಎಸ್ ಕುರಿತು ಹಗುರವಾಗಿ ಪಕ್ಷದ ಶಾಸಕರು ಮಾತನಾಡಿರುವುದು,ಶಾಸಕರೇ ಅಧ್ಯಕ್ಷರಾಗಿರುವ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ತಿಂಗಳ ಹಿಂದೆ ಗಾಂಧಿ ಮೈದಾನದಲ್ಲಿ ಸಾಂಘಿಕ್ ನಡೆಯುವಾಗ ಮಳೆ ಬಂದ ಪರಿಣಾಮ ಕಾಲೇಜು ಕಟ್ಟಡದಲ್ಲಿ ಸ್ಥಳಾಂತರಿಸಲು ಅವಕಾಶ ದೊರೆಯದಿರುವುದು ಸಂಘದ ಕೆಂಗಣ್ಣಿಗೆ ಗುರಿ ಮಾಡಿದೆ.ಹೀಗಾಗಿ ಆರ್.ಎಸ್.ಎಸ್ ಕೂಡ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಚಿಂತನೆಯಿದೆ.ಆತಂಕ ಎಂದರೆ ಕೆ.ಗೋಪಾಲ ಪೂಜಾರಿ ಯವರ ಎದುರು ಸಮರ್ಥವಾದ ಅಭ್ಯರ್ಥಿ ಯಾರು ಎನ್ನುವುದು ಖಾತ್ರಿಯಾಗಬೇಕಾಗಿದೆ.

ಕ್ಷೇತ್ರಾಧ್ಯಕ್ಷರ ರಾಜಕೀಯ ನಡೆಯೇನು: ಈಗಿರುವ ಪರಿಸ್ಥಿತಿಯಲ್ಲಿ ಹಾಲಿ ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಯವರಿಗೆ ಟಿಕೇಟ್ ದೊರೆತಿಲ್ಲ ಕ್ಷೇತ್ರಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಯವರಿಗೆ ಸಮಸ್ಯೆ ಆಗದು ಇದರ ಜೊತೆಗೆ ಇನ್ನೋರ್ವ ಆಕಾಂಕ್ಷಿಯಾದ ಕೆ.ಬಾಬು ಶೆಟ್ಟಿ ಮತ್ತು ದೀಪಕ್ ಕುಮಾರ್ ಶೆಟ್ಟಿಯವರ ನಡುವೆ ಹಿಂದಿನಿಂದಲೂ ಜಿದ್ದಾಜಿದ್ದಿ ಮುಂದುವರಿದಿದೆ.ತೆರೆಮರೆಯ ಕೈ ಮೇಲಾಟ ನಡೆದಿರುವುದು ಕಾರ್ಯಕರ್ತರಿಗೆ ತಿಳಿದ ವಿಚಾರವಾಗಿದೆ.ಒಂದೊಮ್ಮೆ ಕೆ.ಬಾಬು ಶೆಟ್ಟಿಯವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ದೊರೆತಲ್ಲಿ ಕ್ಷೇತ್ರಾಧ್ಯಕ್ಷರ ರಾಜಕೀಯ ಭವಿಷ್ಯದ ಮೇಲೆ ಕೂಡ ಪರಿಣಾಮ ಬೀರಲಿದೆ.ಬೈಂದೂರು ಕ್ಷೇತ್ರದಲ್ಲಿ ಈಗಿರುವ ಮಾಹಿತಿ ಪ್ರಕಾರ ಬಿಜೆಪಿಯಲ್ಲಿ ಬಂಟ ಅಥವಾ ಮೊಗವೀರ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ದೊರೆಯುವ ಸಾಧ್ಯತೆಗಳಿವೆ.

ಸಾರ್ವಜನಿಕವಾಗಿ ಬಿಜೆಪಿಯಲ್ಲಿ ಗೊಂದಲವಿಲ್ಲ.ಕಾರ್ಯಕರ್ತರು ಮತ್ತು ನಾಯಕರುಗಳಲ್ಲಿ ಹೊಂದಾಣಿಕೆ ಇದೆ ಎಂದರೂ ಕೂಡ ಮುಸುಕಿನ ಗುದ್ದಾಟ ತೆರೆಮರೆಯ ತಂತ್ರಗಾರಿಕೆ ನಡೆಯುತ್ತಿದೆ.ರಾಜ್ಯ ರಾಷ್ಟ್ರ ಮಟ್ಟದ ನಾಯಕರುಗಳವರೆಗೆ ಟಿಕೆಟ್ ಗಾಗಿ ಪ್ರಯತ್ನ ಪ್ರಚಲಿತದಲ್ಲಿದೆ.ಇದರ ಜೊತೆಗೆ  ಪಕ್ಷ ಸಂಘಟನೆಯ ಪ್ರಯತ್ನದ ಜವಬ್ದಾರಿ ಆರ್.ಎಸ್.ಎಸ್ ನದ್ದಾಗಿದೆ.ಹೀಗಾಗಿ ಚುನಾವಣೆಯ ಫಲಿತಾಂಶಕ್ಕಿಂತ ಬೈಂದೂರು ಬಿಜೆಪಿಯಲ್ಲಿ ಟಿಕೆಟ್ ಯಾರಿಗೆ ಎನ್ನುವ ಕುತೂಹಲವೇ ದೊಡ್ಡ ನಿರೀಕ್ಷೆಯಾಗಿ ಬಿಟ್ಟಿದೆ.

ವರದಿ/ಶಿರೂರು ಡಾಟ್ ಕಾಮ್.

 

 

Leave a Reply

Your email address will not be published.

eight + 3 =