ಬೈಂದೂರು,ಜು.18: ದುರ್ಬಲ ವರ್ಗದವರಿಗೂ ಕೂಡ ಕಾನೂನು ಸೇವೆ ದೊರೆಯಬೇಕು.ಆರ್ಥಿಕ ಸಮಾನತೆ ಎಲ್ಲರಿಗೂ ನ್ಯಾಯ ದೊರೆಯಬೇಕು.ಕಾನೂನಿನ ಅರಿವು ಪ್ರತಿ ನಾಗರೀಕನಿಗೂ ಅವಶ್ಯ.ಸಹಬಾಳ್ವೆಗೆ ಬೇಕಾದ ಅಂಶ ಕಾನೂನಿನಲ್ಲಿ ಅಡಕವಾಗಿದೆ.ಕಾನೂನಿನ ಬಾದ್ಯತೆ ಮತ್ತು ಹಕ್ಕುಗಳ ಅರಿವು ಮುಖ್ಯ.ಕಾನೂನು ರಕ್ಷಣೆ ಮತ್ತು ಸಮರ್ಪಕ ಉಪಯೋಗ ನಮ್ಮೆಲ್ಲರ ಜವಬ್ದಾರಿ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಂ. ಐ. ಅರುಣ್ ಹೇಳಿದರು ಅವರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು,ಜಿಲ್ಲಾ ನ್ಯಾಯಾಂಗ ಉಡುಪಿ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಮತ್ತು ವಕೀಲರ ಸಂಘ (ರಿ.) ಬೈಂದೂರು ಇದರ ವತಿಯಿಂದ ಶನಿವಾರ ಯಡ್ತರೆ ಜೆ.ಎನ್.ಆರ್. ಕಲಾ ಮಂದಿರದಲ್ಲಿ ನಡೆದ ಬೈಂದೂರು ತಾಲೂಕು ಕಾನೂನು ಸೇವೆಗಳ ಸಮಿತಿಯನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ತಾಲೂಕು ಕಾನೂನು ಸೇವೆಗಳ ಸಮಿತಿ ಕುಂದಾಪುರ ಅಬ್ದುಲ್ ರಹೀಮ್ ಹುಸೇನ್ ಶೇಕ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್,ಬೈಂದೂರು ವಕೀಲರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ,ಬೈಂದೂರು ತಹಶೀಲ್ದಾರ ರವಿರಾಜ್ ದೀಕ್ಷಿತ್,ಸಿವಿಲ್ ನ್ಯಾಯಾದೀಶ ಅಬುತಾಯರ್ ಎ,ಕುಂದಾಪುರ ಡಿ.ವೈ.ಎಸ್.ಪಿ ಎಚ್.ಡಿ ಕುಲಕರ್ಣಿ,ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಂ. ಐ. ಅರುಣ್ ರವರನ್ನು ಬೈಂದೂರು ವಕೀಲರ ಸಂಘದ ವತಿಯಿಂದ ಸಮ್ಮಾನಿಸಲಾಯಿತು.

ಹಿರಿಯ ಸಿವಿಲ್ ನ್ಯಾಯಾಧೀಶ ನಿತಿನ್ ವೈ.ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಕೀಲರ ಸಂಘದ ಉಪಾಧ್ಯಕ್ಷ ಚಿಕ್ಕಯ್ಯ ಶೆಟ್ಟಿ ಸ್ವಾಗತಿಸಿದರು.ಬೈಂದೂರು ಸಹಾಯಕ ಸರ್ಕಾರಿ ಅಭಿಯೋಜಕ ರಾಜಶೇಖರ್ ಪಿ.ಶ್ಯಾಮರಾವ್ ಕಾರ್ಯಕ್ರಮ ನಿರೂಪಿಸಿದರು.ನಿಕಟಪೂರ್ವಾಧ್ಯಕ್ಷ ಮೋಬಿ ಪಿ.ಸಿ ಸಮ್ಮಾನ ಪತ್ರವಾಚಿಸಿದರು.ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಮೇಸ್ತ ಶಿರೂರು ವಂದಿಸಿದರು.
ವರದಿ/ಗಿರಿ ಶಿರೂರು