ಬೈಂದೂರು: ಜಗತ್ತಿನಲ್ಲಿ ಬಹಳಷ್ಟು ಜನ ಧನವಂತರಿದ್ದಾರೆ.ಆದರೆ ಇದ್ದವರಿಗೆಲ್ಲಾ ಕೊಡುವಷ್ಟು ಔದಾರ್ಯಗಳಿಲ್ಲ.ಹೃದಯವಂತರು ಮಾತ್ರ ಇನ್ನೊಬ್ಬರ ಕಷ್ಟಕ್ಕೆ ಸ್ಪಂಧಿಸುತ್ತಾರೆ.ಅಂತಹ ಚಿಂತನೆಗಳು ಮುಖ್ಯ.ಜ್ಞಾನಕ್ಕೆ ಯಾವುದೇ ಜಾತಿಯಿಲ್ಲ,ಇತರರ ಒಳಿತುಗಳಿಗೆ ಸಹಕಾರ ನೀಡಲು ಬೇಧಭಾವವಿಲ್ಲ.ಡಾ.ಗೋವಿಂದ ಬಾಬು ಪೂಜಾರಿಯವರ ಸೇವಾ ಕೈಂಕರ್ಯ ಶ್ರೇಷ್ಟವಾದ ಕಾರ್ಯವಾಗಿದೆ ಎಂದು ಎಂದು ಅವಧೂತ ಶ್ರೀ ವಿನಯ್ ಗುರೂಜೀ ಗೌರಿಗದ್ದೆ ಹೇಳಿದರು ಅವರು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.)ಉಪ್ಪುಂದ ಶೈಕ್ಷಣಿಕ,ಸಾಮಾಜಿಕ ಸೇವಾ ಸಂಸ್ಥೆ ಇದರ ಟ್ರಸ್ಟ್ ವತಿಯಿಂದ ಮರವಂತೆ ಗಾಂಧಿನಗರದ ಬಡಕುಟುಂಬಕ್ಕೆ ನೀಡುವ ಶ್ರೀ ವರಲಕ್ಷ್ಮೀ ನಿಲಯದ 11ನೇ ಮನೆ ಪ್ರವೇಶೋತ್ಸವ ಕಾರ್ಯಕ್ರಮದ ಮನೆ ಕೀ ಅನ್ನು ಹಸ್ತಾಂತರಿಸಿ ಈ ಮಾತುಗಳನ್ನಾಡಿದರು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಅಧ್ಯಕ್ಷ ಹಾಗೂ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ ಧರ್ಮ ಜಾಗೃತಿಗಾಗಿ ಹಾಗೂ ಹಿಂದುತ್ವದ ರಕ್ಷಣೆಗಾಗಿ ವಯಕ್ತಿಕ ಬದುಕನ್ನು ಮರೆತು ಧರ್ಮ ಕಾರ್ಯದಲ್ಲಿ ತೊಡಗುವ ಸಂಘಟನೆಯ ಕಾರ್ಯಕರ್ತರ ಪರಿಶ್ರಮ,ತ್ಯಾಗ ಸದಾ ಸ್ಮರಣೀಯವಾಗಿದೆ.ಅವರ ಕಷ್ಟಗಳಿಗೆ,ನೋವುಗಳಿಗೆ ಸ್ಪಂಧಿಸಬೇಕಾಗಿರುವುದು ಧರ್ಮ ಜಾಗೃತಿಯ ಮುಂದಾಳುಗಳ ಕರ್ತವ್ಯ.ಹೀಗಾಗಿ ಎಲ್ಲಾ ಪ್ರಮುಖರ ಮಾರ್ಗದರ್ಶನದಲ್ಲಿ ಹಿಂದೂ ಕಾರ್ಯಕರ್ತರ ಕಷ್ಟಕ್ಕೆ ಧ್ವನಿಯಾಗುವ ಮೂಲಕ ಮನೆ ನಿರ್ಮಿಸಿಕೊಡಲಾಗಿದೆ.ಮುಂದೆಯೂ ಕೂಡ ಹಿಂದುತ್ವದ ರಕ್ಷಣೆಗೆ ತೊಡಗುವ ಸಂಘಟನೆಗಳಿಗೆ ಶಕ್ತಿಯಾಗಿ ಸಹಕರಿಸುತ್ತೇನೆ ಎಂದರು.
ಮುಖ್ಯ ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್ ಪ್ರಾಂತ್ಯದ ಸಹ ಕಾರ್ಯದರ್ಶಿ ಶರನ್ ಪಂಪ್‌ವೆಲ್, ಅಭಿನವ್ ಹಾಲಾಶ್ರೀ,ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಪ್ರಕಾಶ ಕುಕ್ಕೆಹಳ್ಳಿ ಹಾಗೂ ಚೈತ್ರಾ ಕುಂದಾಪುರ,ನಾರಾಯಣ ಶೆಣೈ,ಬಾಬು ಪೂಜಾರಿ,ತಾಯಿ ಮಂಜಮ್ಮ,ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳದ ವತಿಯಿಂದ ಉದ್ಯಮಿ ಹಾಗೂ ಸಮಾಜ ಸೇವಕ ಡಾ.ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು.ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
News/pic: Giri shiruru