ಬೈಂದೂರು: ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಅಭಿವೃದ್ದಿ ಕಾಮಗಾರಿಯಿಂದಾಗಿ ಬೈಂದೂರು – ಕೊಲ್ಲೂರು ರಸ್ತೆಯ ಗೋಳಿಹೊಳೆ, ಆರೆಶಿರೂರು ಮುಂತಾದ ಕಡೆ ಸಂಪೂರ್ಣ ಕೆಸರುಮಯವಾಗಿದೆ.ಅದರಲ್ಲೂ ಸೇತುವೆ ನಿರ್ಮಾಣಮಾಡುತ್ತಿರುವ ಸ್ಥಳದಲ್ಲಿ ಬದಲಿ ರಸ್ತೆ ನಿರ್ಮಿಸಿದ್ದು ವಾಹನಗಳ ನಿರಂತರ ಸಂಚಾರದಿಂದ ಕಿ.ಮೀ ಗಟ್ಟಲೆ ರಸ್ತೆ ಕೆಸರಿನಿಂದ ತುಂಬಿದ್ದು ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಸಂಚಾರ ಮಾಡದಂತಹ ಪರಿಸ್ಥಿತಿ ಬಂದಿದೆ.
ಸ್ಥಳೀಯರ ಆಕ್ರೋಶ: ಕೊಲ್ಲೂರು ರಸ್ತೆ ಅಭಿವೃದ್ದಿ ಗುತ್ತಿಗೆ ಪಡೆದ ಕಂಪೆನಿ ಅತ್ಯಂತ ವಿಳಂಬ ಮತ್ತು ಅವೈಜ್ಞಾನಿಕ ಕಾಮಗಾರಿ ಆರಂಭಿಸಿದೆ.ಈ ಕುರಿತು ಶಾಸಕರು ಮತ್ತು ಸಂಸದರ ಗಮನಕ್ಕೆ ತರಲಾಗಿದ್ದು ಪ್ರತ್ಯೇಕ ಸಭೆಯಲ್ಲಿ ಈ ಬಗ್ಗೆ ಮುಂಜಾಗೃತೆ ವಹಿಸಬೇಕೆಂದು ಅಽಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಎಚ್ಚರಿಸಿದರು ಸಹ ಕ್ಯಾರೇ ಅನ್ನದ ಪರಿಸ್ಥಿತಿ ಉಂಟಾಗಿದೆ.ಮಳೆಗಾಲದ ಆರಂಭದಲ್ಲಿ ನೀರಿನ ಹರಿವಿನಿಂದ ಬದಲಿ ರಸ್ತೆ ಕೊಚ್ಚಿ ಹೋಗಿ ಅವಾಂತರ ತಂದಿತ್ತು.ಬಳಿಕ ನಾಲ್ಕೈದು ಬಾರಿ ಈ ಸಮಸ್ಯೆ ಉಲ್ಬಣಿಸಿತ್ತು.ಪ್ರತಿದಿನ ಬೈಂದೂರಿನಿಂದ ನೂರಾರು ಟ್ಯಾಕ್ಸಿಗಳು, ವಾಹನಗಳು ಕೊಲ್ಲೂರು ಕಡೆಗೆ ಸಾಗುತ್ತಿದ್ದು ಈ ಕೆಸರಿನಿಂದಾಗಿ ವಾಹನ ಬಾಡಿಗೆ ಪಡೆಯಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಬಂದಿದೆ.ಇದು ಸಂಪೂರ್ಣ ಇಲಾಖೆ ಹಾಗೂ ವ್ಯವಸ್ಥೆಯ ಲೋಪ,ಸಂಸದರು,ಶಾಸಕರು ಈ ಬಗ್ಗೆ ಅಧಿಕಾರಿಗಳಿಗೆ ಗಂಭೀರವಾಗಿ ತಿಳಿಸಬೇಕು.ಸ್ಥಳೀಯರಿಗೆ ತಿರುಗಾಡಂತ ಪರಿಸ್ಥಿತಿ ಇದೆ.ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ವಸಂತ ಕುಮಾರ್ ಹೆಗ್ಡೆ ಆರೆಶಿರೂರು ತಿಳಿಸಿದ್ದಾರೆ.ಸ್ಥಳೀಯರಿಂದ ರಸ್ತೆಯ ಕೆಸರು ಜಾಗದಲ್ಲಿ ಸಸಿ ಹಾಗೂ ಬಾಳೆಗಿಡ ನೆಟ್ಟು ದುರಸ್ಥಿಗಾಗಿ ಆಗ್ರಹಿಸಿದರು.

ವರದಿ/ಗಿರಿ ಶಿರೂರು