ಶಿರೂರು: ಶಿರೂರಿನ ಪ್ರಸಿದ್ದ ಐತಿಹಾಸಿಕ ಹಿನ್ನೆಲೆಯ ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮ ಎಪ್ರಿಲ್ 02 ರಿಂದ ಎಪ್ರಿಲ್ 14 ರ ವರೆಗೆ ನಡೆಯಲಿದೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆ ಯವರ ಶುಭಾಶೀರ್ವಾದಗಳೊಂದಿಗೆ ಮಾರ್ಗದರ್ಶಕರಾದ ಡಾ.ಜಿ.ಶಂಕರ್ ನೇತ್ರತ್ವದಲ್ಲಿ ವೇದಮೂರ್ತಿ ಶ್ರೀ ರಾಮಚಂದ್ರ ಪರಂಭಟ್ಟ ಶಿರಾಲಿ ತಂತ್ರಿವರ್ಯರ ನೇತ್ರತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಲಿದೆ.ಜಗದ್ಗುರು ಆದಿ ಶಂಕರಾಚಾರ್ಯ ಮಹಾ ಸಂಸ್ಥಾನಂ ಶ್ರೀ ವಾಗೀಶ್ವರಿ ಲಕ್ಷ್ಮೀ ನೃಸಿಂಹ ಭಾಗವತ ಮಹಾ ಪೀಠಂ ಪುಣ್ಯ ಸಂಗಮ ಕ್ಷೇತ್ರ ಶ್ರೀ ಮಠ ಬಾಳೆಕುದ್ರು ಹಂಗಾರಕಟ್ಟೆ ಶ್ರೀ ಶ್ರೀ ವಾಸುದೇವ ಸದಾಶಿವಾಶ್ರಮ ಶ್ರೀಪಾದಂಗಳವರು ಜಗದ್ಗುರು ಆದಿ ಶಂಕರಾಚಾರ್ಯ ಮಹಾ ಸಂಸ್ಥಾನಂ ಶ್ರೀಮದ್ ಎಡನೀರು ಮಠ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಮುಖಂಡರು,ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಪ್ರತಿದಿನ ವಿವಿಧ ಧಾರ್ಮಿಕ ,ಸಾಂಸ್ಕ್ರತಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನದ ಹಿನ್ನೆಲೆ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಡಿಭಾಗದಲ್ಲಿರುವ ಸುವಿಶಾಲ ಶಿರೂರು ಗ್ರಾಮದಲ್ಲಿರುವ ಪುರಾತನ ಐತಿಹ್ಯವಿರುವ ಧಾರ್ಮಿಕ ಶ್ರದ್ಧಾಕೇಂದ್ರ, ಈ ಊರಿನ ಹೆಸರೇ ಹೇಳುವಂತೆ ಇದು ಸಮುದ್ರದ ’ಅಳಿವೆ’ ಪ್ರದೇಶದಲ್ಲಿರುವ ಗದ್ದೆಯಾದ್ದರಿಂದ ಈ ಊರಿಗೆ ಅಳ್ವೆಗದ್ದೆ ಎಂಬುದು ಅನ್ವರ್ಥನಾಮವೂ ಹೌದು. ಕಡಲನ್ನೇ ನಂಬಿ ಅಲೆಗಳಂತೆ ಅನಿಶ್ಚಿತ ಬದುಕಿನಲ್ಲಿಯೂ ನಿಶ್ಚಿತವಾದ ಜೀವನ ಕಟ್ಟಿಕೊಂಡ ಜನ ಜೀವನ ಈ ಊರಿನ ವೈಶಿಷ್ಟ್ಯ. ಈ ಬದುಕಿನ ಆಸ್ತಿಕತೆಗೆ ಸೂರ್ತಿಯಾಗಿ ಅಸದೃಶ ದೈವಿಕತೆ ಪ್ರಸರಿಸಿದ್ದು ಇಲ್ಲಿನ ಅಧಿದೇವತೆಯಾದ ಶ್ರೀ ಮಹಾಗಣಪತಿ. ಆರಾಧ್ಯ ಮಹಾಗಣಪತಿಯು ಅಳ್ವೆಗದ್ದೆಯಲ್ಲಿ ನೆಲೆಸಿದ ಹಿನ್ನೆಲೆಯು ಅತ್ಯಂತ ಕೌತುಕದ ಸಂಗತಿ. ಸರಿ ಸುಮಾರು ಎಂಟುನೂರೈವತ್ತು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಕಾಶಿಯಿಂದ ಗಣಪತಿ ವಿಗ್ರಹವನ್ನು ತಂದು ಪೂಜಿಸಲು ಪ್ರಾರ೦ಭಿಸಿದರೆಂಬ ಮಾತು ಪ್ರಚಲಿತದಲ್ಲಿದೆ. ಇಂದಿನ ದೋಣಿ ನಿಲುಗಡೆಯ ತಾಣವೇ ಅಂದು ಮಹಾಗಣಪತಿ ದೇವರ ಸಾನಿಧ್ಯವಿದ್ದ ಸ್ಥಳವಾಗಿತ್ತು.

1568 ನೇ ಇಸವಿಯಲ್ಲಿ ’ಅವರಸಿ’ ಎಂದೇ ಖ್ಯಾತರಾದ ನಗಿರೆ ಮತ್ತು ಹಾಡುವಳ್ಳಿ ಎಂಬೆರಡು ಸೀಮೆಗಳ ಮಹಾರಾಣಿ ಚೆನ್ನಭೈರಾದೇವಿಯವರು ಮ೦ಗಳೂರು ಬಂದರಿಗೆ ಹೋಗುವ ಸಲುವಾಗಿ ನಮ್ಮ ದೇವಳದ ಮುಂಭಾಗದಲ್ಲಿ ಕುದುರೆಯೇರಿ ಸಾಗುವಾಗ ಕುದುರೆಯ ಕಾಲು ಎತ್ತಿಡಲಾಗದಷ್ಟು ಹೂಳಿನಲ್ಲಿ ಹೂತು ಪ್ರಯಾಣ ನಿಲ್ಲಿಸಬೇಕಾದ ಪರಿಸ್ಥಿತಿ ಒದಗಿತು. ಸಾಕಷ್ಟು ಉಪಾಯಗಳನ್ನು ಪ್ರಯೋಗಿಸಿಯೂ ಫಲ ಕಾಣದಾಗ ಮಹಾಗಣಪತಿ ದೇವರಿಗೆ ಪೂರ್ಣವಾಗಿ ಶರಣಾಗಿ ಪ್ರಾರ್ಥಿಸುತ್ತಾರೆ. ಅಚ್ಚರಿ ಎಂಬಂತೆ ಕುದುರೆಯ ಕಾಲುಗಳು ಹೂಳಿನಿಂದ ಮುಕ್ತವಾಗಿ ಪಯಣ ಮುಂದುವರಿಯಿತು. ಮಾತ್ರವಲ್ಲ ಯೋಜಿಸಿ ಹೊರಟಿದ್ದ ಕೆಲಸವು ನಿರೀಕ್ಷೆಗೂ ಮೀರಿ ಫಲಪ್ರದವಾಯಿತು. ಈ ಯಶಸ್ಸಿಗೆ ಮಹಾಗಣಪತಿಯ ದಿವ್ಯ ಕಾರುಣ್ಯವೇ ಕಾರಣವೆಂಬುದಾಗಿ ಮನಗಂಡ ಮಹಾರಾಣಿಯವರು ದೇವಳಕ್ಕೆ ಬಂದು ಹರಕೆ ಸಲ್ಲಿಸುತ್ತಾರೆ. ಮಾತ್ರವಲ್ಲ ತನ್ನ ಭೇಟಿಯ ಕುರುಹಾಗಿ ತಾನು ಕುದುರೆ ಸವಾರರಾಗಿರುವ ಬಿಂಬವನ್ನು ಶಿಲೆಯಲ್ಲಿ ಕೆತ್ತಿಸಿ ದೇವಳದ ಬಲ ಮುಂಭಾಗದಲ್ಲಿ ಸ್ಥಾಪಿಸುತ್ತಾರೆ. ದೇವಳದಲ್ಲಿ ನಿತ್ಯಪೂಜೆ ಹಾಗೂ ಇನ್ನಿತರ ಧಾರ್ಮಿಕ ಕಲಾಪಗಳು ವಿಧಿವತ್ತಾಗಿ ನಡೆಯಬೇಕೆಂಬುದಾಗಿ ಆಜ್ಞಾಪಿಸಿ ಅನುಷ್ಠಾನಕ್ಕೆ ತರುವಲ್ಲಿ ಕಾರ್ಯೋನ್ಮುಖರಾಗುತ್ತಾರೆ. ಮಹಾರಾಣಿಯವರಿಂದ ನಿಯೋಜಿತರಾದ ಕಾಶಿಭಟ್ಟರ ಮನೆತನದವರು ಇಂದಿಗೂ ದೇವಳದ ಸಮೀಪವೇ ವಾಸವಿದ್ದಾರೆ. ಸುಮಾರು ಎಂಟೂವರೆ ಶತಮಾನಗಳ ಐತಿಹ್ಯವಿರುವ ಈ ದೇವಳವು ಇದೀಗ ಮೂರನೇ ಬಾರಿಗೆ ಪುನಃ ನಿರ್ಮಾಣಗೊಂಡಿದೆ. ಕಲೆ, ವಾಸ್ತುಶಿಲ್ಪ, ಕಾಷ್ಠ ಶಿಲ್ಪದ ಅಪರೂಪದ ಕೆತ್ತನೆಗಳು ಸೂಚಿಗಲ್ಲಿನಂತೆ ನೋಡುಗರನ್ನು ಆಕರ್ಷಿಸುತ್ತಿದೆ. ಪ್ರಸ್ತುತ ದೇವಳದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮ.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸುವ ಗೌರವಾಧ್ಯಕ್ಷರು ನಾಡೋಜ ಡಾ.ಜಿ.ಶಂಕರ್  ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು,ರಾಮ ಎನ್.ಅಳ್ವೆಗದ್ದೆ ಅಧ್ಯಕ್ಷರು ಜೀರ್ಣೋದ್ದಾರ ಸಮಿತಿ ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ,ಗಣಪತಿ ಎಸ್.ಮೊಗವೀರ ಅಧ್ಯಕ್ಷರು ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಹಾಗೂ ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ/ಗಿರೀಶ್ ಶಿರೂರು

 

Leave a Reply

Your email address will not be published. Required fields are marked *

thirteen − one =